ಎಲಿಫೆಂಟ: ಮುಂಬಯಿಯ ಅಪೊಲೊ ಬಂದರಿನಿಂದ ಈಶಾನ್ಯಕ್ಕೆ 12 ಕಿಮೀ ದೂರದಲ್ಲಿ, ಗುಡ್ಡಗಳಿಂದ ಕೂಡಿದ, ಸು. 7 ಕಿಮೀ ಸುತ್ತಳತೆಯುಳ್ಳ ಒಂದು ದ್ವೀಪ. ಇಲ್ಲಿದ್ದ ಒಂದು ಬೃಹದಾಕಾರದ ಆನೆಯ ವಿಗ್ರಹದಿಂದ ಇದಕ್ಕೆ ಎಲಿಫೆಂಟ್ ಎಂಬ ಹೆಸರು ಬಂತು. ಈಗ ಈ ವಿಗ್ರಹವನ್ನು ಮುಂಬಯಿಗೆ ಸಾಗಿಸಲಾಗಿದೆ. ಮೊದಲಿನ ಹೆಸರು ಶ್ರೀಪುರಿ, ಘಾರಾಪುರಿ ಎಂಬುದು ಮತ್ತೊಂದು ಹೆಸರು. ಈ ದ್ವೀಪ 8ನೆಯ ಶತಮಾನದವರೆಗೆ ಕೊಂಕಣ ಪ್ರದೇಶ ಮತ್ತು ಪಶ್ಚಿಮ ಭಾರತವನ್ನು ಆಳುತ್ತಿದ್ದ ಮೌರ್ಯ ಸಂತತಿಯ ಒಂದು ಶಾಖೆಯ ದೊರೆಗಳ 
ಅಧೀನದಲ್ಲಿತ್ತು. ಅನಂತರ ಚಲುಕ್ಯ ಪುಲಿಕೇಶಿಯ ಕೈಸೇರಿ, ಕ್ರಮವಾಗಿ ರಾಷ್ಟ್ರಕೂಟರು, ಕಲ್ಯಾಣಿಯ ಚಾಳುಕ್ಯರು, ದೇವಗಿರಿಯ ಯಾದವರು ಮತ್ತು ಅಹಮದಾಬಾದಿನ ಮುಸ್ಲಿಂ ದೊರೆಗಳ ಅಧೀನದಲ್ಲಿದ್ದು 1534ರಲ್ಲಿ ಪೋರ್ಚುಗೀಸರ ಕೈ ಸೇರಿತು.

1673ರಲ್ಲಿ ಪೋರ್ಚುಗೀಸರು ಈ ಗುಹಾಲಯಗಳನ್ನು ದನದ ದೊಡ್ಡಿಗಳನ್ನಾಗಿ ಮಾಡಿಕೊಂಡಿದ್ದರು. 1682ರಲ್ಲಿ ಮರಾಠರು ಈ ದ್ವೀಪವನ್ನು ವಶಪಡಿಸಿಕೊಂಡರು. 1774ರಲ್ಲಿ ಇದು ಬ್ರಿಟಿಷರ ವಶವಾಯಿತು. ಅನೇಕ ವರ್ಷಗಳ ಕಾಲ ಇಲ್ಲಿ ಬ್ರಿಟಿಷ್ ಸೈನ್ಯದ ಒಂದು ತುಕಡಿ ಇತ್ತು. ಆಗ ರಾಜಕುಮಾರನಾಗಿದ್ದ ಇಂಗ್ಲೆಂಡಿನ ಏಳನೆಯ ಎಡ್ವರ್ಡ್ಗೆ ಇಲ್ಲಿ ಒಂದು ಔತಣ ಕೂಟವನ್ನು ಏರ್ಪಡಿಸಿದ್ದರು (1875), 1890ರಲ್ಲಿ ಮುಂಬಯಿನ ಲೋಕೋಪಯೋಗಿ ಇಲಾಖೆ ಇದರ ಮೇಲ್ವಿಚಾರಣೆಯನ್ನು ವಹಿಸಿ ಕೊಂಡಿತು. 1909ರಲ್ಲಿ ಈ ಗುಹಾಲಯಗಳು ರಕ್ಷಿಸಲ್ಪಟ್ಟ  ಪುರಾತನ ಅವಶೇಷಗಳೆಂದು ಪರಿಗಣಿಸಲ್ಪಟ್ಟವು.

ಪ್ರಾಚೀನ ಅವಶೇಷಗಳು - ವಾಸ್ತುಶಿಲ್ಪ
ಪ್ರ.ಶ. ಸು. 3ರಿಂದ 10-11ನೆಯ ಶತಮಾನದವರೆಗೂ ಪ್ರಸಿದ್ಧವೆನಿಸಿ ಮೆರೆದ ಈ ದ್ವೀಪದ ಅನೇಕ ಕಡೆಗಳಲ್ಲಿ ಕಲ್ಲು ಮತ್ತು ಇಟ್ಟಿಗೆಯ ಅಡಿಪಾಯಗಳೂ ಶಿಲ್ಪಗಳೂ ಕಂಡುಬಂದಿವೆ. ಇಲ್ಲಿಯ ಒಂದು ಗುಡ್ಡದ ಮೇಲೆ ಬೌದ್ಧಸ್ತೂಪವೊಂದರ ಅವಶೇಷಗಳಿವೆ. ಆದರೆ ಇವೆಲ್ಲಕ್ಕೂ ಹೆಚ್ಚು ಪ್ರಸಿದ್ಧವಾಗಿರುವುದು ಇಲ್ಲಿಯ ಗುಹಾದೇವಾಲಯಗಳು. ಎಲಿಫೆಂಟದಲ್ಲಿ ಒಟ್ಟು ಆರು ಗುಹೆಗಳಿವೆ. ಇವೆಲ್ಲವೂ ಶೈವಧರ್ಮಕ್ಕೆ ಸಂಬಂಧಿಸಿದುವು. ಅವುಗಳಲ್ಲಿ ದೊಡ್ಡ ಗುಹೆಯೇ ಅತಿಮುಖ್ಯವಾದುದು. ಉತ್ತರಕ್ಕೆ ಮುಖ ಮಾಡಿರುವ ಈ ಗುಹೆ ಪುರ್ಣವಾಗಿ ಕಗ್ಗಲ್ಲಿನದಾಗಿದ್ದು 16-17 ಅಡಿ ಎತ್ತರವಿದೆ. ಒಟ್ಟು ಉದ್ದ 130' ಅಗಲವೂ ಸುಮಾರು ಅಷ್ಟೇ. ಆದರೆ ತಳವಿನ್ಯಾಸದಲ್ಲಿ ಇದು ಪುರ್ಣ ಚಚ್ಚೌಕವಾಗಿಲ್ಲ. ಪಶ್ಚಿಮ, ಉತ್ತರ ಮತ್ತು ಪುರ್ವ ದಿಕ್ಕುಗಳಲ್ಲಿ 54' ಅಗಲ ಮತ್ತು 16 1/2' ಉದ್ದದ ಮುಖಮಂಟಪಗಳೂ ದಕ್ಷಿಣದಲ್ಲಿ ಸುಮಾರು ಇಷ್ಟೇ ವಿಸ್ತಾರದ ಹಜಾರದ ಚಾಚೂ ಇವೆ. ಮಧ್ಯದ ಹಜಾರ ಆರು ಕಂಬಗಳ ಆರು ಸಾಲುಗಳಿಂದ ಅಂಕಣಗಳಾಗಿ ವಿಭಾಗಿತವಾಗಿದೆ. ಆದರೆ ಕೆಲವೆಡೆ ಹೊರಗೋಡೆಯನ್ನನುಸರಿಸಿ ಕಂಬಗಳ ಬದಲು ಅರೆಗಂಬಗಳಿವೆಯಲ್ಲದೆ ಹಜಾರದ ಪಶ್ಚಿಮಕ್ಕೆ ಎಂಟು ಕಂಬಗಳಿರುವ ಜಾಗದಲ್ಲಿ ನಾಲ್ಕುಕಡೆ ದ್ವಾರಗಳಿರುವ ಒಂದು ಗರ್ಭಗೃಹವಿದೆ. ಗರ್ಭಗೃಹದ ಮಧ್ಯದಲ್ಲಿ ಲಿಂಗವೂ ಅದರ ದ್ವಾರಗಳ ಎರಡು ಪಕ್ಕಗಳಲ್ಲಿ ದ್ವಾರಪಾಲಕ ವಿಗ್ರಹಗಳೂ ಇವೆ. ವಿಶಾಲವಾದ ಗೋಡೆಗಳ ಮೇಲೂ ಶಿಲ್ಪಗಳಿವೆ. ಈ ಗುಹೆಯಲ್ಲಿ ಯಾವ ಶಾಸನಗಳೂ ಸಿಕ್ಕಿಲ್ಲವಾದ್ದರಿಂದ, ಇದರ ಕಾಲವನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಚಚ್ಚೌಕದ ತಳ, ಅಷ್ಟ ಅಥವಾ ಷೋಡಶ ಕೋನಗಳ ಮಧ್ಯಭಾಗ ಮತ್ತು ದುಂಡು ಮೇಲು ಭಾಗವಿರುವ ದಪ್ಪಕಂಬಗಳು, ಎಲ್ಲೋರದ ಕೆಲವು ಗುಹೆಗಳನ್ನು ಹೋಲುವ ತಳ ವಿನ್ಯಾಸ, 

ಶಿಲ್ಪಗಳ ಅಲಂಕರಣ ಶೈಲಿ ಮುಂತಾದುವುಗಳಿಂದ ಈ ಗುಹೆ ಪ್ರ.ಶ. 6-8ನೆಯ ಶತಮಾನದ ಮಧ್ಯಭಾಗದಲ್ಲಿ ನಿರ್ಮಿತವಾಗಿರಬೇಕೆಂದು ಊಹಿಸಬಹುದು. ಇತರ ಗುಹೆಗಳೂ ಇದೇ ಕಾಲದವೇ, ಆದರೇ ವಿನ್ಯಾಸದಲ್ಲಾಗಲೀ ಶಿಲ್ಪಗಳಲ್ಲಾಗಲೀ ದೊಡ್ಡಗುಹೆಗೆ ಇವು ಸರಿಗಟ್ಟುವುದಿಲ್ಲ.

ಮೂರ್ತಿಶಿಲ್ಪ: ಎಲಿಫೆಂಟದ, ಅದರಲ್ಲೂ ಇಲ್ಲಿನ ದೊಡ್ಡ ಗುಹೆಯ, ಶಿಲ್ಪ ದಖನ್ನಿನ ಗುಹಾಶಿಲ್ಪ ಶ್ರೇಣಿಯಲ್ಲಿಯೇ ಅತ್ಯುಚ್ಛಮಟ್ಟದ ಶಿಲ್ಪಗಳಿಗೆ ಪ್ರಸಿದ್ಧವಾಗಿದೆ. ಸಮಕಾಲೀನ ಶಿಲ್ಪದಂತೆ ಇಲ್ಲಿಯವೂ ಬೃಹತ್ ಶಿಲ್ಪಗಳೇ. ಶಿಲ್ಪಗಳು ನೆಲದಿಂದ ಮೇಲಿನವರೆಗೆ ಹನ್ನೆರಡರಿಂದ ಹದಿನೆಂಟು ಅಡಿಗಳ ಎತ್ತರವಿದ್ದರೂ ಉತ್ತಮಭಾವಪ್ರಕಟನೆ, ಅಂಗಾಂಗಗಳ ಸಹಜ ಪ್ರಮಾಣ ಮತ್ತು ನೈಜತೆಯಿಂದ ಕೂಡಿ ಸುಂದರ ಕೃತಿಗಳಾಗಿವೆ. ಈ ಗುಹೆಯಲ್ಲಿ ಶಿಲ್ಪಗಳಿಗೆ ಅಳವಡಿಸಿರುವ ಬೆಳಕು-ನೆರಳಿನ ಸಂಯೋಜನೆ ಇಲ್ಲಿಯ ವೈಶಿಷ್ಟ್ಯ.

ಎಲಿಫೆಂಟದ ಶಿಲ್ಪಗಳೆಲ್ಲವೂ ಶೈವಮತ ಸಂಬಂಧವಾದುವು. ದೊಡ್ಡ ಗುಹೆಯಲ್ಲಿ ಮುಂಬಾಗಿಲಿಗೆ ನೇರೆ ಎದುರಿನಲ್ಲಿರುವ ಮಹೇಶಮೂರ್ತಿಯೇ ಇಲ್ಲಿಯ ಪ್ರಧಾನಶಿಲ್ಪ. ಗುಹೆಯ ಹಿಂಗೋಡೆಯ ಮೇಲೆ ಮುಂಬಾಗಿಲಿಗೆ ನೇರ ಎದುರಾಗಿ ಕೆತ್ತಲಾಗಿರುವ ಈ ಶಿಲ್ಪ 6.3ಮೀ ಅಗಲವೂ 5.3ಮೀ. ಎತ್ತರವೂ ಇದೆ. ಎದೆಯಿಂದ ಮೇಲ್ಬಾಗ ಮಾತ್ರವೇ ಇರುವ ಈ ಶಿಲ್ಪದಲ್ಲಿ ಮಹೇಶ ತ್ರಿವದನನಾಗಿದ್ದು ಸೃಷ್ಟಿ. ಸ್ಥಿತಿ, ಲಯಗಳ ಸಮನ್ವಯದ್ಯೋತಕನಾಗಿದ್ದಾನೆ. ದೇವನ ಮೂರು ಮುಖಗಳಲ್ಲಿ ನೇರ ಎದುರುನಲ್ಲಿ ರುವುದು ಶಿವನ ತತ್ಪುರುಷ ಅಥವಾ ಮಹಾದೇವತತ್ತ್ವದ ರೂಪ. ದೇವನ ದುಂಡು ಮುಖ. ತುಂಬುಗಲ್ಲ. ಅಕೃಷ್ಟ ಚಿಬುಕ ಮತ್ತು ನಿಮೀಲಿತ ನೇತ್ರಗಳು ಅವರ ಶಾಂತ, ಗಂಭೀರ ನಿರ್ವಿಕಾರ, ನಿರಾಮಯ ಸ್ವರೂಪವನ್ನು ವ್ಯಕ್ತಪಡಿಸುತ್ತಿವೆ. ಆದರೆ, ಶಾಲವಾದ ಸ್ಕಂಧ, ಸ್ವಲ್ಪವೇ ಉಬ್ಬಿದ ನಯವಾದ ಎದೆ ಮತ್ತು ದಪ್ಪಕಂಠದಿಂದಾಗಿ ಇದೇ ದೇವ ಮಹಾಶಕ್ತಿಯನ್ನೇ ತನ್ನಲ್ಲಿ ಹುದುಗಿಸಿಕೊಂಡಿರುವಂತೆ ಕಾಣಿಸುತ್ತಾನೆ. ಎಡಗೈಯಲ್ಲಿ ಹಿಡಿದಿರುವ ತೊಟ್ಟು ಮೇಲಾದ ಬೀಜಪುರಕ ಸಾಂಕೇತಿಕವಾಗಿ ಇದಕ್ಕೆ ಹೊಂದಿಕೊಳ್ಳು ವಂತಿದೆ. ಮೂರ್ತಿಯ ಮುಖದ ಎರಡು ಕಡೆಗಳಲ್ಲೂ ಇರುವ 
ದೀರ್ಘ ಕರ್ಣಗಳು, ಮೇಲಿನ ಮಕುಟದ ತಳ ಮತ್ತು ಎದೆಯ ಮೇಲಿನ ಆಭರಣ, ಈ ದೈವಿಕ ಮುಖಕ್ಕೊಂದು ಚೌಕಟ್ಟನ್ನು ಒದಗಿಸಿದಂತಿದ್ದು ಆಕರ್ಷಣೆಯನ್ನು ವೃದ್ಧಿಸಿದೆ. ತಲೆಯ ಮೇಲಿರುವುದು ಜಟಾಮುಕುಟವಾದರೂ ಕೀರ್ತಿ ಮುಖ ಮತ್ತು ವಿವಿಧ ಆಭರಣಗಳಿಂದ ಅಲಂಕೃತ ವಾಗಿದ್ದು. ಅಲ್ಲಿಯ ಪ್ರತಿ ಅಂಗುಲದಲ್ಲೂ ಕುಸುರಿಯ ಕೌಶಲವನ್ನು ಕಾಣಬಹುದಾಗಿದೆ. ಈ ಅಲಂಕರಣ ನಯವಾದ ಮುಖದ ಸಹಜತೆಯನ್ನು ಎಳ್ಳಷ್ಟೂ ಕುಂದಿಸದೆ, ಮುಖದಲ್ಲಿ ವ್ಯಕ್ತವಾಗಿರುವ ದೈವಿಕ ಕಳೆಯನ್ನೆಲ್ಲ ಕ್ರೋಢೀಕರಿಸಿ ಮೆಲೆದ್ದು ಸುತ್ತಲೂ 
ಪಸರಿಸುತ್ತದೆಯೇನೊ ಎಂಬ ಭಾವವನ್ನು ಹುಟ್ಟಿಸುತ್ತದೆ. ಎಡ ಬಲಗಡೆಯ ಮುಖಗಳು ಒಂದು ಪಕ್ಕಕ್ಕೆ ತಿರುಗಿಕೊಂಡಿರುವಂತೆ ಇವೆ. ಬಲಗಡೆಯ ಮುಖ ಶಿವನ ಅಘೋರ ಅಥವಾ ಭೈರವ ತತ್ತ್ವದ ಪ್ರತಿರೂಪ. ದಪ್ಪ ತುಟಿಗಳು, ತಿರುವಿದ ಮೀಸೆ, ಕೋಪದಿಂದ ಊದಿದಂತಿರುವ ಕಣ್ಣಗಳು ಮುಂಚಾಚಿದ ಗಡ್ಡವುಳ್ಳ ಚಿಬುಕ ಇವು ಶಿವನ ಘೋರ ರೌದ್ರಭಾವವನ್ನು ತೋರಿಸಿವೆ. ಇವಕ್ಕೆ ಪುರಕವಾಗಿ ಸರ್ಪ ಮತ್ತು ರುಂಡದಿಂದ ಲಂಕೃತವಾದ ದಪ್ಪ ಜಟೆಗಳಿಂದ ಹೆಣೆಯಲಾಗಿ ರುವ ಮುಕುಟ, ಇಳಿಬಿದ್ದ ಜಟೆಗಳು ಇವೆ. ಧರಿಸಿರುವ ಸರ್ಪಾಭರಣ ಮತ್ತು ಬಲಗೈಯಲ್ಲಿ ಹಿಡಿದೆತ್ತಿರುವ ದಪ್ಪ ಸರ್ಪ ಘೋರತೆಯನ್ನು ಮತ್ತಷ್ಟು ವರ್ಧಿಸಿವೆ. ಎಡಭಾಗದಲ್ಲಿರುವ ಮುಖ ತದ್ವಿರುದ್ಧವಾದುದು. ಇದು ವಾಮದೇವ ಅಥವಾ ಉಮಾ ತತ್ತ್ವದ ಪ್ರತೀಕ. ಇಲ್ಲಿ ಕೋಮಲತೆಯೇ ಶಿಲ್ಪವಾಗಿದೆ. ನಯವಾದ ಸ್ವಲ್ಪವೇ ಉಬ್ಬಿದ ಕೆನ್ನೆ. ನೇರ ಎಸಳುಮೂಗು, ದಪ್ಪ ರಾಗಪುರಿತ ತುಟಿ ಮತ್ತು ನಿಮೀಲಿತ ನೇತ್ರ-ಇವು ಅಪುರ್ವ ಶೋಭೆಯನ್ನಿತ್ತಿವೆ. ಕಿವಿಯಲ್ಲಿನ ಪತ್ರಾಭರಣ, ಕೆನ್ನೆಯಮೇಲೆ ಇಳಿಬೀಳುತ್ತಿರುವ ಗುಂಗುರು ಕೂದಲು, ಮಣಿಹಾರ, ಪದಕ, ಪುಷ್ಪಗಳಿಂದಲಂಕೃತವಾದ ಮಕುಟ ಮತ್ತು ಕೈಯಲ್ಲಿ ಹಿಡಿದಿರುವ ಕಮಲಗಳು ಈ ಕೋಮಲ ಸೌಂದರ್ಯ ಭಾವವನ್ನು ಮತ್ತಷ್ಟು ಉಕ್ಕಿಸುತ್ತವೆ. ಒಂದೇ ಮೂರ್ತಿಯಲ್ಲಿ ವಿವಿಧ ರಸಭಾವಗಳನ್ನು ಒಂದಕ್ಕೊಂದು ಪೋಷಕವಾಗುವಂತೆ ಸೆರೆಹಿಡಿದಿರುವ ಜಾಣ್ಮೆ. ಶಿಲ್ಪದ ಸ್ಫುಟ ಪ್ರಮಾಣ ಮತ್ತು ಚತುರ ಅಲಂಕರಣದಿಂದಾಗಿ ಈ ಮಹೇಶಮೂರ್ತಿಶಿಲ್ಪ ಲೋಕ ಪ್ರಸಿದ್ಧವಾಗಿದೆ.

ಇಂಥ ಒಂದು ಅಪುರ್ವ ಶಿಲ್ಪವನ್ನು ಕಡೆಯಲು ಆರಿಸಿರುವ ಸ್ಥಳ ಮತ್ತು ಕೆತ್ತಿರುವ ರೀತಿ ಸಹ ಗಮನಾರ್ಹವಾದುದು. ಹಿಂಭಾಗದ ಗೋಡೆಯಲ್ಲಿ ಸುಮಾರು 3.3ಮೀ ಗಳಷ್ಟು ಒಳಸರಿದಂತಿರುವ 6.3 ಮೀ ಅಗಲದ ಕೋಷ್ಠದಲ್ಲಿ ನೆಲದಿಂದ ಮೇಲಿನವರೆಗೂ ಹಬ್ಬಿದಂತೆ ಉಬ್ಬುಶಿಲ್ಪವಾಗಿ ಇದನ್ನು ಕೆತ್ತಲಾಗಿದೆ. ಉಬ್ಬುಶಿಲ್ಪವಾದರೂ ಪುರ್ಣಶಿಲ್ಪದಂತೆಯೇ ಭಾಸವಾಗುತ್ತದೆ. ಯಾವ ಕೆತ್ತನೆಯೂ ಇಲ್ಲದ ಹಿಂಭಾಗದ ಗೋಡೆ ಶಿಲ್ಪಕ್ಕೆ ಒಂದು ವಿಶಾಲವಾದ ಹಿನ್ನೆಲೆಯನ್ನು ಒದಗಿಸುತ್ತದೆ. ಶಿಲ್ಪ ಗೋಡೆಯಿಂದ ಸ್ವಲ್ಪ ಒಳಸರಿದಂತಿರುವುದರಿಂದ ಇದರ ಮೇಲೆ ಹೆಚ್ಚು ಬೆಳಕು ಬೀಳುವುದಿಲ್ಲ. ಪಕ್ಕದಿಂದ ಕಂಬಗಳ ಮಧ್ಯೆ ತೂರಿಬರುವ ಅಲ್ಪಸ್ವಲ್ಪ ಬೆಳಕು ಸಹ ಶಿಲ್ಪಕ್ಕೆ ಪುರ್ಣವಾಗಿ ಹರಡದೆ ಮಧ್ಯ ಮುಖದ ಮೇಲಷ್ಟೇ ಕೇಂದ್ರೀಕೃತವಾಗಿ, ಅದರ ಸೌಂದರ್ಯವನ್ನೂ ಪ್ರಭಾವವನ್ನೂ ಆಕರ್ಷಣೆಯನ್ನೂ ಮತ್ತಷ್ಟು ಹೆಚ್ಚಿಸುತ್ತದೆ. ಈ ಶಿಲ್ಪ ಮುಂಬಾಗಿಲಿಗೆ ನೇರ ಎದುರಿಗಿದ್ದರೂ ಅಲ್ಲಿಂದ ಸು. 36.4ಮೀಗಳಷ್ಟು ಒಳಗಿರುವುದರಿಂದ ಬಿಸಿಲಿನ ಕಾಲದಲ್ಲೂ ಇಲ್ಲಿ ಬೀಳುವ ಬೆಳಕು ಅಷ್ಟು ಪ್ರಖರವಾಗೇನೂ ಇರುವುದಿಲ್ಲ. ಆದರೆ ಈ ಅರೆ ಬೆಳಕಿನ ಸ್ಥಿತಿಯೇ ಈ ಶಿಲ್ಪವನ್ನು ನೋಡುವವರ ಮೇಲೆ ಒಂದು ಅಸಾಧಾರಣ ಪರಿಣಾಮವನ್ನು ಉಂಟು ಮಾಡುತ್ತದೆ. ಹೊರ ಬಿಸಿಲಿನಿಂದ ಬಂದ ಬಾಗಿಲ ಬಳಿ ನಿಂತರೆ ಒಳಗೆ ಕಾಣುವುದು ಗಾಡಾಂಧಕಾರ ಅಷ್ಟೇ. ಆದರೆ ದೃಷ್ಟಿಯನ್ನು ಈ ಶಿಲ್ಪದ ದಿಶೆಯಲ್ಲಿ ಸ್ವಲ್ಪಕಾಲ ಕೇಂದ್ರೀಕರಿಸಿದರೆ ಮಸಕು ಮಸಕಾಗಿ ರೂಪಗೊಳ್ಳುತ್ತಿರುವ ಮೂರ್ತಿ ಆಗತಾನೇ ಪೃಥ್ವೀಗರ್ಭದಿಂದ ಎದ್ದುಬರುತ್ತಿರುವುದೋ ಎಂದು ಭಾಸವಾಗುತ್ತದೆ. ಕೆಲವು ಕ್ಷಣದಲ್ಲೇ ಮಹಾದೇವನ ಹಸನ್ಮುಖ ಸ್ಪಷ್ಟವಾಗುತ್ತ ಬರುತ್ತದೆ. ನಿಧಾನವಾಗಿ ದೇವನ ಅಘೋರ, ವಾಮದೇವ ಮುಖಗಳು ಸ್ಫುಟವಾಗಿ ಕಾಣತೊಡಗಿ ಮಹಾದೇವನ ವಿರಾಟಸ್ವರೂಪದ ದರ್ಶನವಾಗುತ್ತದೆ.  ಈ ಮಹಾದೇವನನ್ನು ಸೃಷ್ಟಿಸಿದ ಶಿಲ್ಪಿಯ ಕೌಶಲ ಮತ್ತು ತಪಸ್ಸಿದ್ದಿ ಇಲ್ಲಿಯ ಇತರ ಶಿಲ್ಪಗಳಲ್ಲೂ ಕಂಡುಬರುತ್ತದೆ. ದ್ವಾರಪಾಲಕ ವಿಗ್ರಹಗಳನ್ನು ಬಿಟ್ಟರೆ ಇಲ್ಲಿಯ ಮುಖ್ಯ ಶಿಲ್ಪಗಳು ಎಂಟು ಮಾತ್ರ. ಇವೆಲ್ಲ ಶಿವಲೀಲಾಮೂರ್ತಿಗಳು. ಗೋಡೆಯ ಮೇಲೆ ವಿಶಾಲವಾದ ಸ್ಥಳ ದೊರೆಕಿದೆಡೆಗಳಲ್ಲಿ ಅರೆಗಂಬಗಳಿಂದಲಂಕರಿಸಿ ಮಧ್ಯೆ ಮಾಡದಂತೆ ಮಾಡಿ ಇವನ್ನು ಕೆತ್ತಿದ್ದಾರೆ. ಇವೂ ಸುಮಾರು ನೆಲದಿಂದ ಮೇಲಿನ ವರೆಗೆ ಹಬ್ಬಿರುವ ಬೃಹತ್ ಶಿಲ್ಪಗಳೇ. ಇವುಗಳಲ್ಲಿ ಯಾವುದೋ ಕಾರ್ಯನಿರತನಾದ, ತತ್ಕಾರ್ಯ ಪೋಷಕವಾದ ಭಾವವನ್ನು ಬಹು ಚೆನ್ನಾಗಿ ವ್ಯಕ್ತಪಡಿಸುತ್ತಿರುವ ಶಿವನ ವಿಗ್ರಹವೇ ಪ್ರಧಾನ. ಇದರ ಸುತ್ತಲೂ ಇರುವ ಉಪದೇವತೆಗಳು ಮತ್ತು ಗಣಗಳೂ, ಶಿವನಿಗಿಂತ ಗಾತ್ರದಲ್ಲಿ ಚಿಕ್ಕವಾಗಿ ತೋರಿಸಲ್ಪಟ್ಟಿದ್ದರೂ ಅವೂ ತಮ್ಮ ಸಹಜ ಭಾವಗಳೊಡನೆ ಚಿತ್ರಿತವಾಗಿವೆ. ಇಂಥ ಒಂದೊಂದು ಶಿಲ್ಪವನ್ನು ನೋಡಿದಾಗಲೂ ನಾಟಕದ ಸ್ತಬ್ಧದೃಶ್ಯವನ್ನು ನೋಡಿದಂತೆನಿಸುತ್ತದೆ. ವಸ್ತು ಮತ್ತು ಭಾವ ನಿರೂಪಣೆಯಲ್ಲಲ್ಲದೆ ಬೆಳಕು-ನೆರಳಿನ ಸಂಯೋಜನೆಗೂ ವಿವಿಧ ಶಿಲ್ಪಗಳ ಸ್ಥಳ ವಿನ್ಯಾಸಕ್ಕೂ ಶಿಲ್ಪಿ ವಿಶೇಷ ಗಮನವನ್ನಿತ್ತಿದ್ದಾನೆ. ಉದಾಹರಣೆಗೆ ಮುಂಬಾಗಿಲಿನ ಒಳಗೆ ಎದುರುಬದುರಾಗಿ ಎರಡು ಶಿಲ್ಪಗಳಿವೆ. ಬಲಗಡೆ ಇರುವುದು ನಟರಾಜ ವಿಗ್ರಹ, ಶಿವ ತನ್ನ ಅಷ್ಟಭುಜಗಳನ್ನೂ ಕಾಲುಗಳನ್ನು ವಿವಿಧ ದಿಶೆಗೆ ಎತ್ತಿ, ರಾಕ್ಷಸನ ಧ್ವಂಸಮಾಡುತ್ತ ತನ್ನ ವಿರಾಟ್ ಶಕ್ತಿಯನ್ನು ಹೊರಚೆಲ್ಲುತ್ತಿದ್ದಾನೆ. ಆದರೆ ಅದಕ್ಕೆ ನೇರ ಎದುರಿಗಿರುವುದು ಶಿವಲಕುಲೀಶನ ಶಿಲ್ಪ. ಅದೇ ಸರ್ವಶಕ್ತನಾದ ಮಹಾದೇವ. ಯಾವ ಅಬ್ಬರ, ಆವೇಶಗಳೂ ಇಲ್ಲದೆ ನಿರ್ವಿಕಾರನಾಗಿ ಮಹಾಯೋಗಿಯಾಗಿ ಅಂತರ್ಮುಖಿಯಾಗಿ ತಪೋಮಗ್ನನಾಗಿದ್ದಾನೆ. ಹಾಗೆಯೇ ಒಂದು ಶಿಲ್ಪದಲ್ಲಿ, ಪಾರ್ವತಿ ಯಾವುದೋ ಕಾರಣಕ್ಕಾಗಿ ಶಿವನ ಮೇಲೆ ಮುನಿಸಿಕೊಂಡು ಅವನಿಂದ ದೂರ ಕುಳಿತಿದ್ದರೆ, ಅದರ ಎದುರಿರುವ ರಾವಣ ಕೈಲಾಸವನ್ನೆತ್ತುತ್ತಿರುವ ಶಿಲ್ಪದಲ್ಲಿ. ಅದೇ ಪಾರ್ವತಿ ರಾವಣನ ಕಾರ್ಯದಿಂದ ಬೆದರಿ ಶಿವನನ್ನು ಬಾಚಿ ತಬ್ಬಿಕೊಂಡಿದ್ದಾಳೆ. ಇನ್ನೊಂದು ಕಡೆ ಶಿವ ಅಂಧಕಾಸುರ ಸಂಹಾರಮೂರ್ತಿಯಾಗಿ ಭಯಂಕರನಾಗಿ ವ್ಯಕ್ತವಾಗಿದ್ದರೆ, ಅದರ ಎದುರಿನಲ್ಲಿ ಕಲ್ಯಾಣ ಸುಂದರಮೂರ್ತಿಯಾಗಿದ್ದಾನೆ, ಮಹೇಶಮೂರ್ತಿಯ ಇಕ್ಕೆಲಗಳಲ್ಲೂ ಇನ್ನೆರಡೂ ಶಿಲ್ಪಗಳಿದ್ದು ಪರಶಿವ ಪ್ರಕೃತಿ ಪುರುಷಾತ್ಮಕನೆಂಬ ಭಾವವನ್ನು ವ್ಯಕ್ತಪಡಿಸುವ ಅರ್ಧನಾರೀಶ್ವರ ಮತ್ತು ಗಂಗಾಧರ ಶಿವನ ರೂಪವನ್ನು ಸಾಕ್ಷಾತ್ಕರಿಸಿವೆ. ಈ ಒಂದೊಂದು ಶಿಲ್ಪವೂ ಎಲಿಫೆಂಟದ ಅನಾಮಿಕ ಶಿಲ್ಪಿಯ ತಪಸ್ಸಿದ್ಧಿಯ ಕುರುಹಾಗಿ, ಭಾರತೀಯ ಶಿಲ್ಪದ ಶ್ರೇಷ್ಠ ಸಾಧನೆಯಾಗಿ ಮೆರೆಯಬಲ್ಲುದು.                  (ವಿ.ಎಸ್.ಎಸ್.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ